ಕಾರ್ಕಳ ಮಾ.11: ವಿಳಾಸ ಕೇಳುವ ನೆಪದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಮಹಿಳೆ ಧರಿಸಿದ್ದ 2 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಸುಳಿಗೆ ಮಾಡಿಕೊಂಡು ಹೋಗಿರುವ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ಚಿನ್ನಾಭರಣಗಳನ್ನು ಕಳೆದುಕೊಂಡ ಕುಕ್ಕುಂದೂರು ಗ್ರಾಮದ ಮಹಿಳೆ ಕೆ.ಗಾಯತ್ರಿ ಕಾಮತ್ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ನಿನ್ನೆ ಕಾರ್ಕಳ ಮಾರಿಗುಡಿಯಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಕ್ಕೆ ತೆರಳಿ ಬಳಿಕ ರಾತ್ರಿ ತಮ್ಮ ಪತಿಯೊಂದಿಗೆ ಮನೆಗೆ ಬಂದಿದ್ದರು. ಈ ವೇಳೆ ಮನೆಯ ಅಂಗಳದಲ್ಲಿ ಸ್ಕೂಟರ್ ನಿಲ್ಲಿಸಿ ಮನೆಯ ಬೀಗ ತೆಗೆಯುತ್ತಿರುವ ಸಮಯ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ಇವರ ಮನೆ ಬಳಿ ಬಂದು ‘33 ನಂಬ್ರ ಮಂಗಮ್ಮನ ಮನೆ ಎಲ್ಲಿ’ ಎಂದು ಕೇಳಿ ಗೇಟನ್ನು ದೂಡಿಕೊಂಡು ಬಂದು ಕೆ.ಗಾಯತ್ರಿ ಅವರು ಧರಿಸಿದ್ದ 2 ಲಕ್ಷ ರೂ. ಮೌಲ್ಯದ 2 ಚಿನ್ನಾಭರಣಗಳನ್ನು ಸುಲಿಗೆ ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದಾಗಿದೆ.